ಗೋಮಾಳ ಎಂದರೇನು? ಯಾವ ಪ್ರದೇಶವನ್ನು ಗೋಮಾಳವೆನ್ನುತ್ತಾರೆ ಎಂದು ಈಗಿನ ಎಷ್ಟೋ ಜನಸಾಮಾನ್ಯರಿಗೆ ಸಾಮಾನ್ಯವಾಗಿ ತಿಳಿದೇ ಇರುವುದಿಲ್ಲ. "ಗೋ" ಎಂದರೆ ಗೋವುಗಳು ಅಥವಾ ದನಗಳು ಎಂತಲೂ ಮತ್ತು "ಮಾಳ" ಎಂಬ ಸಂಸ್ಕೃತ ಪದದ ಅರ್ಥವು “ಪ್ರದೇಶ” ಅಥವಾ “ಬಯಲು” ಎಂಬುದಾಗಿದೆ. ಅಂದರೆ “ಪ್ರತಿ ಹಳ್ಳಿಯ ಅಕ್ಕಪಕ್ಕದಲ್ಲಿ ದನಕರುಗಳಿಗೆ ಮೇಯಲು ಮೀಸಲಿಟ್ಟಿರುವ ಸರಕಾರದ ಭೂಮಿ”ಯನ್ನು ಗೋಮಾಳ, ಗೈರಾಣು ಮತ್ತು ಹುಲ್ಲುಬನ್ನಿ ಎಂದು ಕರೆಯಬಹುದು. ಈ ಭೂಮಿಯನ್ನು ಸಾರ್ವತ್ರಿಕವಾಗಿ ಎಲ್ಲರೂ ಬಳಸಬಹುದಂತಹ ಜಾಗ. ಆದರೆ, ಭೂ ಕಂದಾಯ 1966 ನಿಯಮ 97(1)ರ ಪ್ರಕಾರ ಪ್ರತಿಯೊಂದು ಗ್ರಾಮದಲ್ಲಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗಳಷ್ಟು ಗೋಮಾಳ, ಗೈರಾಣು ಮತ್ತು ಹುಲ್ಲುಬನ್ನಿ ಜಮೀನನ್ನು ಕಾಯ್ದಿರಿಸಬೇಕು ಎಂಬ ನಿಯಮ ಇದ್ದರು ಕೂಡ ಇತ್ತೀಚಿನ ದಿನಗಳಲ್ಲಿ ಗೋಮಾಳಗಳು ಕಣ್ಮರೆಯಾಗುತ್ತಿರುವುದು ಶೋಚನೀಯ. ಬೇರೆ ದೇಶಗಳಲ್ಲಿ ಈ ಪದ್ಧತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ದನಗಳಿಗಾಗಿಯೇ ಪ್ರತ್ಯೇಕ ಭೂಮಿಯನ್ನು ಕಾಯ್ದಿರಿಸಿರುವುದನ್ನು ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು. ನಮ್ಮ ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ರಾಜ್ಯದ ಸುಮಾರು 450 ವರ್ಷಗಳ ಇತಿಹಾಸವನ್ನು ಹುಡುಕುತ್ತಾ ಹೋದರೆ "ಅಮೃತ್ ಮಹಲ್" ಎಂಬ ಜಾನುವಾರು ತಳಿ ಮತ್ತು ಅವುಗಳ ಮೇಯಿಸುವ ಪ್ರದೇಶಗಳು ಅಂದರೆ ಅಮೃತ್ ಮಹಲ್ ಕಾವಲುಗಳ ಬಹುದೊಡ್ಡ ಇತಿಹಾಸದ ಕುರುಹುಗಳು ಸಿಗುತ್ತಾ ಹೋಗುತ್ತವೆ. ಈ ಅಮೃತ್ ಮಹಲ್ ಹೆಸರಿನ ವಿಶಿಷ್ಟ ಜಾತಿಯ ಜಾನುವಾರು ತಳಿಗಳಿಗಾಗಿಯೇ ನೈಸರ್ಗಿಕ ಹುಲ್ಲುಗಾವಲನ್ನು ರಕ್ಷಿಸಿಟ್ಟ ಪ್ರದೇಶಗಳೇ "ಅಮೃತ್ ಮಹಲ್ ಕಾವಲ್", ಬಹುಶಃ ಜಗತ್ತಿನ ಯಾವುದೇ ದೇಶದಲ್ಲಿ ಒಂದು ಪ್ರಭೇದದ ಹಸುವಿನ ತಳಿಯ ರಕ್ಷಣೆಗಾಗಿ ಮೀಸಲಿಟ್ಟ ಬೃಹತ್ ಹುಲ್ಲುಗಾವಲು ಎಂದರೆ ಇದೊಂದೇ ಇರಬಹುದು. ಪ್ರಸ್ತುತ, ನಮ್ಮ ಅಧ್ಯಯನದ ಪ್ರದೇಶದಲ್ಲಿ ಅಮೃತ್ ಮಹಲ್ ಕಾವಲ್ ಗಳು ಇಲ್ಲದ್ದಿದ್ದರು ಸಾಕಷ್ಟು ಗೋಮಾಳ ಭೂಮಿಯನ್ನು ಕಾಣುತ್ತೇವೆ. ವಾರಸುದಾರರು ಇಲ್ಲದ ಗೋಮಾಳ ಪ್ರದೇಶಗಳ ಉಪಯೋಗ ಮತ್ತು ಅದರ ಅರಿವು ಇಲ್ಲವಾದ ಕಾರಣ ಇತ್ತೀಚಿನ ದಿನಗಳಲ್ಲಿ ಭೂಗಳ್ಳರು ಕಬಳಿಸುತ್ತಿದ್ದಾರೆ. ಗ್ರಾಮಸ್ಥರಲ್ಲಿನ ನಿರ್ಲಕ್ಷತೆಯಿಂದ ಅವರಿಗೆ ಮತ್ತು ಅವರ ಜಾನುವಾರುಗಳಿಗೆ ಸೇರಬೇಕಾದ ಗೋಮಾಳ ಭೂಮಿ ಬೇರೆ ಯಾರದ್ದೋ ಪಾಲಾಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸುವುದು ಅಲ್ಲಿನ ಜೀವವೈವಿಧ್ಯತೆಯನ್ನು ದಾಖಲಿಸುವುದು ನಮ್ಮ ಯೋಜನೆಯಲ್ಲಿನ ಒಂದು ಭಾಗವಾಗಿದೆ.