ನಮ್ಮ ಹಿರಿಯರು ಹೇಳುವಂತೆ "ಊರನ್ನು ಕಟ್ಟುವ ಮೊದಲು ಕೆರೆಯನ್ನು ಕಟ್ಟು, ಊರು ತನ್ನಿಂದ ತಾನೇ ಬೆಳೆಯುತ್ತದೆ" ಎಂಬುದು ವಾಸ್ತವ ನುಡಿ. ಹಾಗಾಗಿಯೇ, ಜಗತ್ತಿನ ಎಲ್ಲ ನಾಗರಿಕತೆಗಳು ನದಿಗಳ ಅಳಿವೆಗಳಲ್ಲಿ ಮತ್ತು ಕೆರೆಕಟ್ಟೆಗಳ ಪಕ್ಕದಲ್ಲಿ ಸ್ಥಾಪನೆಗೊಂಡಿರುವುದನ್ನು ನಾವು ನೋಡಿದ್ದೇವೆ. ಸಾಮಾನ್ಯವಾಗಿ ಎಲ್ಲಾ ನಾಗರೀಕತೆಗಳು ಕೂಡ ಬೇಸಾಯ ಮಾಡುವ ಸಲುವಾಗಿ ನೀರಿರುವ ಮೂಲಗಳಲ್ಲಿ ತಮ್ಮ ನಾಗರೀಕತೆಗಳನ್ನು ಕಟ್ಟಿ ಬೆಳೆಸಿದ ಕುರುಹುಗಳನ್ನು ಕಾಣಬಹುದು. ಬರಿ ಮನುಷ್ಯನಲ್ಲದೆಯೇ ಭೂಮಿಯ ಮೇಲೆ ನೀರಿನ ಒರತೆಯೇ ಎಲ್ಲ ಜೀವರಾಶಿಗಳ ವಿಕಾಸಕ್ಕೆ ಮತ್ತು ಅದರ ಪೋಷಣೆಗೆ ಕಾರಣವಲ್ಲವೇ? ಮನುಷ್ಯ ತನ್ನ ವಿಕಾಸದಲ್ಲಿ ವ್ಯವಸಾಯ ಮಾಡುವುದನ್ನು ಕಲಿಯುವುದರ ಜೊತೆಗೆ ನೀರಿಗಾಗಿ ಕಟ್ಟೆಯನ್ನು ಕಟ್ಟಿ ನೀರನ್ನು ಒಂದು ಕಡೆ ಸಂಗ್ರಹಿಸುವುದನ್ನು ಕಲಿತ. ಅದರ ಜೊತೆಯಲ್ಲಿಯೇ ತಮ್ಮ ದಿನನಿತ್ಯ ಬಳಕೆಯಲ್ಲಿ ಸಂಗ್ರಹಿಸಿದ ನೀರನ್ನು ಬಳಸುತ್ತಿದ್ದ. ಈಗಾಗಿ ಹಳ್ಳಕೊಳ್ಳಗಳಿಗೆ ಕಟ್ಟೆಗಳನ್ನು ಕಟ್ಟುವುದರ ಮೂಲಕ ಕೆರೆಗಳನ್ನು ನಿರ್ಮಿಸಿಕೊಂಡು ದಿನನಿತ್ಯ ಕುಡಿಯುವ ನೀರಿಗಾಗಿ, ಬಟ್ಟೆ ಒಗೆಯಲು, ಸ್ನಾನ ಮಾಡಲು, ಜಾನುವಾರು ತೊಳೆಯಲು ಮತ್ತು ನೀರು ಕುಡಿಸಲು ಕೆರೆಗೆ ಬರಬೇಕಿತ್ತು. ನಮ್ಮ ಹಿರಿಯರ ಗಾದೆ ಮಾತೊಂದಿದೆ "ಊರಿಗೆ ಬಂದವಳು ನೀರಿಗೆ ಬಾರದಿರುತ್ತಾಳಾ... " ಎಂದು. ಅಂದರೆ ಹಿಂದೆ ಮನುಷ್ಯನ ಜೀವನದಲ್ಲಿ ಕೆರೆಗಳ ಪಾತ್ರ ಬಹು ದೊಡ್ಡದು, ನಿತ್ಯ ಜೀವನದಲ್ಲಿ ಆ ಊರಿನ ಎಲ್ಲ ಪಾತ್ರಗಳು ಕೆರೆಯ ಸುತ್ತಲೇ ಸುತ್ತುತ್ತಿರುತ್ತವೆ. ಹಾಗಾಗಿಯೇ, ಹಿರಿಯರ ಮೇಲಿನ ಮಾತು ಸತ್ಯವಾಗಿತ್ತು. ಇನ್ನು ನೇರವಾಗಿ ಬೆಂಗಳೂರಿನ ಕೆರೆಗಳ ಇತಿಹಾಸವನ್ನು ನೋಡುವುದಾದರೆ, ಕೆಂಪೇಗೌಡರು ಹೊಸ ಬೆಂಗಳೂರಿನ ಸುತ್ತ ವ್ಯವಸಾಯ ಅಭಿವೃದ್ಧಿಗಾಗಿ ಕೆರೆ ತಟಾಕಗಳನ್ನು ನಿರ್ಮಿಸಿದನು ಎಂಬ ಇತಿಹಾಸವನ್ನು ನಾವು ಕೇಳಿದ್ದೇವೆ. ಆಗಿನ ಕಾಲಕ್ಕೆ ಬೆಂಗಳೂರಿನ ಭೂದೃಶ್ಯ ಯಾವುದೇ ಕೆರೆಗಳನ್ನು ಒಳಗೊಂಡಿರಲಿಲ್ಲ. ತದನಂತರ, ಕ್ರಿ. ಶ. 1537ರಲ್ಲಿ ಕೆಂಪೇಗೌಡ ತನ್ನ ರಾಜಧಾನಿಯನ್ನು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಿದ ನಂತರ ತನ್ನ ಕುಲದೇವತೆ ಕೆಂಪಮ್ಮನ ಹೆಸರಿನಲ್ಲಿ “ಕೆಂಪಾಂಬುಧಿ ಕೆರೆ”ಯನ್ನು (ಕೆಂಪಾಂಬುಧಿ ಕೆರೆಯನ್ನು ಈಗಿನ ಗವೀಪುರದ ಪಕ್ಕದಲ್ಲಿ ಇಂದಿಗೂ ಕೂಡ ನಾವು ನೋಡಬಹುದು) ಮತ್ತು ಧರ್ಮದೇವತೆಯ ಹೆಸರಿನಲ್ಲಿ "ಧರ್ಮಾಂಬುಧಿ ಕೆರೆ" ಯನ್ನು ಮತ್ತು ಆಗಿನ ಬೆಂಗಳೂರಿನ ಜನರಿಗೆ ಕುಡಿಯುವ ನೀರನ್ನೊದಗಿಸುವ ಸಲುವಾಗಿ “ಸಂಪಂಗಿ ಕೆರೆ”ಯನ್ನು ಕಟ್ಟಿಸಿದನು. ಬೆಂಗಳೂರು ಕೆರೆಗಳ ಇತಿಹಾಸವನ್ನು ಹಾಗೆ ಗಮನಿಸಿದರೆ ಸುಮಾರು 500 ವರ್ಷಗಳ ಹಳೆಯ ಅಥವಾ ಇನ್ನೂ ಹಳೆಯದಾದ ಕೆರೆಗಳನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತ ಇಂದಿಗೂ ಕಾಣಬಹುದು. ಸಾಮಾನ್ಯವಾಗಿ ಇದೆ ಕಾಲಘಟ್ಟದಲ್ಲಿ ನಿರ್ಮಿಸಲಾದ ಕೆರೆಗಳನ್ನು ನಮ್ಮ ಅಧ್ಯಯನ ಪ್ರದೇಶದಲ್ಲಿ ಕಾಣಬಹುದಾಗಿದೆ. ಈ ಕೆರೆಗಳ ಮಹತ್ವವನ್ನು ತಿಳಿಯಬೇಕಾದರೆ ನಮ್ಮಲ್ಲಿ ಮೊದಲು ಅವುಗಳ ಬಗ್ಗೆ ಅರಿವು ಮೂಡಬೇಕು ಆದ್ದರಿಂದ ಈ ಯೋಜನೆಯಡಿಯಲ್ಲಿ ಕೆರೆಗಳ ಬಗ್ಗೆ ಹಳ್ಳಿಯ ಯುವಕರ ಸಹಾಯದಿಂದಲೇ ಅಧ್ಯಯನ ಮಾಡುವುದು, ಜೊತೆ ಜೊತೆಯಲ್ಲಿ ಕೆರೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡುವುದು ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಆ ಹಳ್ಳಿಯ ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಕೆರೆಯ ಬಗ್ಗೆ ಮತ್ತು ಅಲ್ಲಿನ ಜೀವವೈವಿಧ್ಯತೆಯ ಬಗ್ಗೆ ತಿಳಿದು ದಾಖಲೀಕರಿಸಲಾಗುವುದು.
ಕ್ರ.ಸಂ | ಕೆರೆಯ ಹೆಸರು | ಗ್ರಾಮದ ಹೆಸರು | ಸರ್ವೇ ನಂ. / ವಿಧ | ಸರ್ಕಾರಿ ದಾಖಲೆಯಲ್ಲಿನ ವಿಸ್ತೀರ್ಣ | ಪ್ರಸ್ತುತ ಕೆರೆಯ ವಿಸ್ತೀರ್ಣ | ಒತ್ತುವರಿ ವಿಸ್ತೀರ್ಣ |
---|---|---|---|---|---|---|
1 | ಸರ್ಕಾರಿ ಖಂಟೆ | Shivanahalli | 152 / ಸರ್ಕಾರಿ | 0:39 | 0.85 | --- |
2 | ಸರ್ಕಾರಿ ಒಂದೆ ಕೆರೆ | Shivanahalli | 5 ಸರ್ಕಾರಿ | 5:12 | 3.68 | --- |
3 | ಮುತ್ತಯ್ಯನ ಕೆರೆ | Ragihalli | 47/ ಸರ್ಕಾರಿ | 06.09 | --- | --- |