ಗುಂಡು ತೋಪು ಎಂಬುದು ಒಂದು ಸಾರ್ವಜನಿಕವಾದ ಜಾಗ, ಮುಖ್ಯವಾಗಿ ಅಲ್ಲಿ ಗ್ರಾಮದ ಎಲ್ಲ ಜಾನುವಾರುಗಳನ್ನು ಮೇಯಿಸುವ ಪ್ರದೇಶವಾಗಿದ್ದು, ಈ ಜಾಗದಲ್ಲಿ ತುಂಬಾ ಹಳೆಯದಾದಂತಹ ಮಾವು, ನೇರಳೆ, ಹುಣಸೆ, ಆಲ, ಅತ್ತಿ, ಗೋಣಿ ಮುಂತಾದ ದೊಡ್ಡ ಮರಗಳನ್ನು ಕಾಣಬಹುದು. ಸಾಮಾನ್ಯವಾಗಿ ಹಳ್ಳಿಗಳ ಸಮೀಪ ನೆರಳು, ನೀರು, ಹಣ್ಣು, ಜಾನುವಾರುಗಳಿಗೆ ಮೇವು ಮುಂತಾದವುಗಳು ಸಿಗಲೆಂದು ಹೈದರ್ ಅಲಿಯು ಸುಮಾರು 250 ವರ್ಷಗಳ ಹಿಂದೆ (18ನೇ ಶತಮಾನದ ಮಧ್ಯಭಾಗದ ಅವಧಿಯಲ್ಲಿ) ಈ ಗುಂಡುತೋಪುಗಳ ನಿರ್ಮಾಣ ಮಾಡಿರುವುದನ್ನು ಇತಿಹಾಸದಲ್ಲಿ ನಾವು ಗಮನಿಸಬಹುದು. ಈಗಲೂ ಸಹ ಗುಂಡು ತೋಪುಗಳಲ್ಲಿನ ಮರಗಳನ್ನು ಹಾಗೆ ಗಮನಿಸಿದರೆ ಅವುಗಳ ಗಾತ್ರ ಸುಮಾರು ಇನ್ನೂರು-ಮುನ್ನೂರು ವರ್ಷಗಳ ಹಳೆಯ ಮರಗಳೆಂದು ಸುಲಭವಾಗಿ ಅಂದಾಜಿಸಬಹುದಾಗಿದೆ. ಬೆಂಗಳೂರಿನ ಅರೆ-ನಗರಾಭಿವೃದ್ಧಿ ಪ್ರದೇಶಗಳಲ್ಲಿ ಈ ಗುಂಡು ತೋಪುಗಳು ಕಂಡು ಬರುವುದನ್ನು ನಾವು ಕಾಣಬಹುದು. ಈಗಲೂ ಸಹ ನಮ್ಮ ಅಧ್ಯಯನ ಪ್ರದೇಶದಲ್ಲಿ ಕೆಲ ಗುಂಡು ತೋಪುಗಳನ್ನು ಗುರುತಿಸಲಾಗಿದೆ. ಅಧ್ಯಯನ ಪ್ರದೇಶದಲ್ಲಿನ ಗುಂಡುತೋಪುಗಳಲ್ಲಿನ ಮರಗಳು ಮತ್ತು ಜೀವವೈವಿಧ್ಯತೆಯನ್ನು ದಾಖಲೀಕರಿಸಲಾಗುವುದು.