ಮಹಾಭಾರತದ ಕಾಲದಿಂದಲೂ ಅಶ್ವತ್ಥ ಮರಕ್ಕೆ ಸಂಬಂಧಿಸಿದ ಅನೇಕ ಕಥೆಗಳ ಉಲ್ಲೇಖವನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವೆಂದರೆ ಸತಿ ಸಾವಿತ್ರಿಯ ಕಥೆ, ಪುರೂವರ ಮಹಾ ಶಕ್ತ ರಾಜನ ಕಥೆ, ಅರಳಿ ಮರದ ಮೂಲದಲ್ಲಿ ಬ್ರಹ್ಮನೂ, ಮಧ್ಯದಲ್ಲಿ ವಿಷ್ಣುವೂ, ತುದಿ ಭಾಗದಲ್ಲಿ ಶಿವ ನೆಲೆಸಿದ್ದಾರೆ ಎಂಬ ಪದ್ಮಪುರಾಣ ಕಥೆಗಳು, ಋಷಿ-ಮುನಿಗಳು ಜಪ-ತಪಗಳು ಮಾಡಿದ ಕಥೆಗಳು. ಬುದ್ಧ ಕ್ರಿಸ್ತಪೂರ್ವ ಸುಮಾರು 500 ರಲ್ಲಿ ಇದೆ ಬೋಧಿವೃಕ್ಷ ಅಥವಾ ಅರಳಿ ಮರದ ಕೆಳಗೆ ಜ್ಞಾನೋದಯವನ್ನು ಪಡೆದರು ಎಂಬ ಇತಿಹಾಸವನ್ನು ನೋಡಿದ್ದೇವೆ. ಇದೇ ರೀತಿಯ ಇನ್ನು ಹಲವಾರು ಕಥೆಗಳನ್ನು ನಾವು ಓದಿದ್ದೇವೆ. ಈ ಅರಳಿ ಮರದಂತಹ ಎಷ್ಟೋ ಗಿಡಮರಗಳು ಪ್ರತಿನಿತ್ಯ ನೋಡುತ್ತಿದ್ದರೂ ಕೂಡ ಅವುಗಳ ಉಪಯೋಗ, ಗುಣ ಲಕ್ಷಣಗಳು ನಮ್ಮ ಅರಿವಿಗೆ ಬಂದಿರುವುದಿಲ್ಲ. ಹಾಗೆಯೇ ನಮ್ಮ ಊರುಗಳಲ್ಲಿ ಇರುವ ಅಶ್ವತ್ಥಕಟ್ಟೆ ಅಥವಾ ಅರಳಿಕಟ್ಟೆಯಲ್ಲಿನ ಮರಗಳು ಕೂಡ ಹೊರತಾಗಿಲ್ಲ. ಭಾರತದ ಬಹುತೇಕ ಗ್ರಾಮಗಳಲ್ಲಿ ಈ ಅಶ್ವತ್ಥಕಟ್ಟೆ ಅಥವಾ ಅರಳಿಕಟ್ಟೆಯನ್ನು ಕಾಣಬಹುದು. ಪ್ರತಿ ಗ್ರಾಮದ ಮುಂದೆ ಎರಡು ಅರಳಿ ಮರಗಳ ನಡುವೆ ಒಂದು ಬೇವಿನ ಮರ ನೆಟ್ಟಿ ಬೆಳೆಸಿ ಸುತ್ತಲೂ ಕಟ್ಟೆಯನ್ನು ಕಟ್ಟಿ ನಾಗರಕಲ್ಲನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಿಪಾಠ ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿಯಾಗಿದೆ. ಅಶ್ವತ್ಥಕಟ್ಟೆಗಳನ್ನು ಪೂಜಿಸುವ ಅಭ್ಯಾಸ ನಮಗೆಲ್ಲರಿಗೂ ಇದ್ದರು ಕೂಡ, ಇಂದು ಅವುಗಳು ಹಲವಾರು ಕಾರಣಗಳಿಂದ ನಾಶವಾಗುತ್ತಿದ್ದು, ಅವುಗಳ ಸಂರಕ್ಷಣಿಯಲ್ಲಿ ನಾವು ಕಣ್ಣು ಮುಚ್ಚಿದ್ದೇವೆ. ಅಶ್ವತ್ಥಕಟ್ಟೆಗಳು ದೇವರು ಎಂಬ ಒಂದೇ ಕಾರಣಕ್ಕೆ ಇಂದು ಉಳಿದುಕೊಂಡಿವೆ. ಇಂತಹ ಪವಿತ್ರ ಅಶ್ವತ್ಥಕಟ್ಟೆಗಳು ನಮ್ಮ ಅಧ್ಯಯನ ಪ್ರದೇಶದಲ್ಲಿ ಸಾಕಷ್ಟು ಇದ್ದು, ಅವುಗಳ ದಾಖಲೀಕರಣ ಮಾಡಿ ಅಲ್ಲಿನ ಜೀವವೈವಿಧ್ಯತೆಯನ್ನು ಸಹ ದಾಖಲೀಕರಿಸಲಾಗುವುದು.