ಕಾಮನ್ಸ್ ಗಳು ಅನೇಕ ಸಮುದಾಯಗಳಿಂದ ರಕ್ಷಿಸಲ್ಪಟ್ಟ, ನೂರಾರು ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿರುವ ಭೂಮಿಯಾಗಿದ್ದು, ನೈಸರ್ಗಿಕ ವಸ್ತುಗಳನ್ನು ಒಳಗೊಂಡಂತೆ ಸಮಾಜದ ಎಲ್ಲಾ ಸದಸ್ಯರಿಗೆ ಪ್ರವೇಶಿಸಬಹುದಾದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳುಳ್ಳ ಪ್ರದೇಶವಾಗಿದೆ. ಉದಾಹರಣೆಗಳೆಂದರೆ ಹಳ್ಳಿ ಅರಣ್ಯಗಳು, ದೇವರ ಕಾಡುಗಳು, ಗುಂಡುತೋಪುಗಳು, ಸ್ಮಶಾನಗಳು, ಕೆರೆಗಳು, ಗೋಮಾಳಗಳು, ಗೋಕಟ್ಟೆಗಳು, ರಸ್ತೆ ಬದಿಯ ಸಾಲು ಮರಗಳು ಮತ್ತು ಅರಳಿಕಟ್ಟೆಗಳು. ಕಾಮನ್ಸ್ ಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇವು ಜೀವವೈವಿಧ್ಯತೆಯ ಸಮೃದ್ಧ ಭಂಡಾರಗಳಾಗಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ, ಹಲವಾರು ಜೀವಿಗಳಿಗೆ ಆಹಾರ ಮತ್ತು ಮೇವಿನ ಮೂಲವಾಗಿಯೂ ಮತ್ತು ಸೂಕ್ಷ್ಮ ಹವಾಮಾನ ನಿಯಂತ್ರಣದ ಕೆಲಸದಲ್ಲಿ ಬಹಳ ಮುಖ್ಯವಾಗಿವೆ. ನಿರ್ಲಕ್ಷ್ಯ ಮತ್ತು ನಿರಾಸಕ್ತಿಯಿಂದಾಗಿ ಕಾಮನ್ಸ್ ಗಳು ಕ್ಷೀಣಿಸುತ್ತಿವೆ. ಬೆಂಗಳೂರಿನಂತಹ ಮಹಾನಗರದಿಂದ ತ್ಯಾಜ್ಯವನ್ನು ಕಾಮನ್ಸ್ ಪ್ರದೇಶಗಳಲ್ಲಿ ಸುರಿಯಲಾಗುತ್ತಿದೆ. ಭೂ ದಣಿಗಳಿಂದ ಸದ್ದಿಲ್ಲದ್ದೇ ಕೆರೆ - ಕುಂಟೆ, ಗೋಮಾಳ ಪ್ರದೇಶವನ್ನು ಕಬಳಿಸುವ ಸಂಚು ನಡೆಯುತ್ತಲೇ ಇದೆ. ಇನ್ನು ವಾರಸುದಾರರು ಇಲ್ಲದ ಕೆರೆಗಳು, ಕಳೆಗಳಿಂದ ತುಂಬಿದ್ದು ದುರಸ್ಥಿಯ ಸ್ಥಿತಿಯಲ್ಲಿವೆ. ನಗರೀಕರಣದಿಂದ ಈ ಪ್ರದೇಶಗಳ ಮೇಲಿನ ಒತ್ತಡವು ದ್ವಿಗುಣಗೊಳ್ಳುತ್ತಲೇ ಇವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ peri-urban ಪ್ರದೇಶಗಳಲ್ಲಿನ Commons ಗಳನ್ನೂ ಉಳಿಸಿಕೊಳ್ಳುವುದು ಮತ್ತು ಅಲ್ಲಿನ ಜೈವಿಕ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವಲ್ಲಿ ಸಮುದಾಯಗಳು ಮತ್ತು ಮಕ್ಕಳ ಪಾತ್ರ ಬಹಳ ಮುಖ್ಯ. ಅವರಿಗೆ ಇವುಗಳ ಮಹತ್ವದ ಬಗ್ಗೆ ಶಿಕ್ಷಣ ಮತ್ತು ಅರಿವು ಮೂಡಿಸುವುದು ಬಹಳ ಸೂಕ್ತ. ಆ ನಿಟ್ಟಿನಲ್ಲಿ Wildlife Conservation Group (WCG) ಮತ್ತು ರಾಮಕೃಷ್ಣ ಮಿಷನ್, ಶಿವನಹಳ್ಳಿ ಬಹಳಷ್ಟು ಕೆಲಸಗಳನ್ನು ಮಾಡಿದೆ ಮತ್ತು ಮಾಡುತ್ತಿದೆ. ಈ ಯೋಜನೆಯ ಮೂಲ ಉದ್ದೇಶವು ಕಾಮನ್ಸ್ ಗಳ ಪ್ರದೇಶದಲ್ಲಿನ ವಿವಿಧ ಸಂಪನ್ಮೂಲಗಳ ನಕ್ಷೆಗಳನ್ನು ರಚಿಸುವುದು. ಮಕ್ಕಳು, ಯುವಕರು ಮತ್ತು ಇತರ ಸ್ಥಳೀಯರಲ್ಲಿ ಅರಿವನ್ನು ಬೆಳೆಸುವ ಮೂಲಕ ಕಾಮನ್ಸ್ ಗಳ ಬಗ್ಗೆ ಮೆಚ್ಚುಗೆಯನ್ನು ಬೆಳೆಸುವುದು. ತಮ್ಮ ಸ್ಥಳೀಯ ಜೀವವೈವಿಧ್ಯದೊಂದಿಗೆ ಮರುಸಂಪರ್ಕಿಸಲು ಮತ್ತು ಕಾಮನ್ಸ್ ಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು. ಈ ಪ್ರಮುಖ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರವನ್ನು ತೆಗೆದುಕೊಳ್ಳಲು ಸ್ಥಳೀಯ ಸಮುದಾಯವನ್ನು ಸಶಕ್ತಗೊಳಿಸಲು ಪ್ರಯತ್ನಿಸುವುದು..
ಈಗಿನ ಬೆಂಗಳೂರು ಇರುವ ಪ್ರದೇಶವನ್ನು ಹಲವಾರು ರಾಜರು ಅಥವಾ ರಾಜ ವಂಶಸ್ಥರುಗಳು ಆಳಿದ್ದಾರೆ. ಮೊದಲಿಗೆ ಚೋಳರಿಂದ ಶುರುವಾಗಿ ಗಂಗರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದವರೆಗೆ ಎಲ್ಲಾರು ಬೆಂಗಳೂರಿನ ಬೆಳವಣಿಗೆಯಲ್ಲಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಒಂದು ಭಾಗ. ಕ್ರಿ. ಶ. 1537ರಲ್ಲಿ ಕೆಂಪೇಗೌಡ ತನ್ನ ರಾಜಧಾನಿಯನ್ನು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಿದ ನಂತರದ ಕಾಲಘಟ್ಟದಲ್ಲಿ ಬೆಂಗಳೂರು ಹೆಚ್ಚು ಅಭಿವೃದ್ಧಿಗೊಳ್ಳತೊಡಗಿತು. ಆಗಿನ ಬೆಂಗಳೂರಿನ ಅಭಿವೃದ್ಧಿಯನ್ನು ಗಮನಿಸಿದ ವಿಜಯನಗರ ಅರಸನಾಗಿದ್ದ ಕೃಷ್ಣದೇವರಾಯನ ತಮ್ಮನಾದ ಅಚ್ಯುತರಾಯನಿಗೆ ಈ ವಿಷಯ ತಿಳಿದು ಸಂತೋಷಗೊಂಡು ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳನ್ನು ಕೆಂಪೇಗೌಡನಿಗೆ ದಾನವಾಗಿ ಕೊಟ್ಟನು. ಅವುಗಳೆಂದರೆ ಉತ್ತರ ಭಾಗಕ್ಕೆ ಹೆಸರಘಟ್ಟ ಮತ್ತು ಚಿಕ್ಕಬಾಣವಾರ. ದಕ್ಷಿಣಕ್ಕೆ ವರ್ತೂರು, ಬೇಗೂರು, ತಲಘಟ್ಟಪುರ, ಕುಂಬಳಗೂಡು ಮತ್ತು ಕೆಂಗೇರಿ. ಆನೇಕಲ್ ಗೆ ಸೇರಿರುವ ಜಿಗಣಿಯನ್ನು ಸಹ ದಾನವಾಗಿ ಕೊಟ್ಟಿರುವ ಉಲ್ಲೇಖಗಳಿವೆ. ವಿಜಯನಗರದ ಅರಸರಿಂದ ಕೆಂಪೇಗೌಡರಿಗೆ ದಾನವಾಗಿ ಬಂದಂತಹ ಪ್ರದೇಶದಲ್ಲಿ ನಮ್ಮ ಅಧ್ಯಯನ ಕ್ಷೇತ್ರದ ಪಂಚಾಯಿತಿಗಳಾದ ಜಿಗಣಿ ಹೋಬಳಿಯ ರಾಗಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಮಂಟಪ ಗ್ರಾಮ ಪಂಚಾಯಿತಿಗಳು ಇರುವುದನ್ನು ಗಮನಿಸಬಹುದು. ಇಲ್ಲಿ ಈ ಇತಿಹಾಸದ ಕತೆಯ ಹಿನ್ನೆಲೆ ಏಕೆಂದರೆ, ಅಧ್ಯಯನ ಪ್ರದೇಶದಲ್ಲಿನ ಕೆಲವು ಕಾಮನ್ಸ್ ಗಳ ಚರಿತ್ರೆ ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವುದು. ಈ ಎರಡು ಗ್ರಾಮ ಪಂಚಾಯಿತಿಗಳು ವಿಭಿನ್ನ ರೀತಿಯ ನೈಸರ್ಗಿಕ ಭೂದೃಶ್ಯಗಳನ್ನು ಹೊಂದಿವೆ. ರಾಗಿಹಳ್ಳಿ ಗ್ರಾಮ ಪಂಚಾಯಿತಿಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದಿದ್ದು ನಗರೀಕರಣದಿಂದ ದೂರ ಉಳಿದಿದೆ. ಆದರೆ ಮಂಟಪ ಗ್ರಾಮ ಪಂಚಾಯಿತಿಯು ಉತ್ತರಕ್ಕೆ ಇರುವ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಇದ್ದು, ದಕ್ಷಿಣಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ. ಈ ಎರಡು ಅಧ್ಯಯನ ಕ್ಷೇತ್ರಗಳಲ್ಲಿಯೂ ಮಾನವಜನ್ಯ ಚಟುವಟಿಕೆಗಳಿಂದ ಭೂ ಹೊದಿಕೆಯ ಬದಲಾವಣೆಯನ್ನು ಸಾಕಷ್ಟು ಕಾಣಬಹುದು. ರಾಗಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಯನ ಪ್ರದೇಶವು 12°42'2.32"N ಉತ್ತರ ಅಕ್ಷಾಂಶದಿಂದ 12°45'29.57"N ಉತ್ತರ ಅಕ್ಷಾಂಶದವರಿಗೆ ಮತ್ತು 77°33'24.81"E ಪೂರ್ವ ರೇಖಾಂಶದಿಂದ 77°35'48.50"E ಪೂರ್ವ ರೇಖಾಂಶದವರಿಗೆ ಕಂಡುಬರುತ್ತದೆ. ಮಂಟಪ ಗ್ರಾಮ ಪಂಚಾಯಿತಿಯ ಅಧ್ಯಯನ ಪ್ರದೇಶವು 12°46'39.64"N ಉತ್ತರ ಅಕ್ಷಾಂಶದಿಂದ 12°50'19.96"N ಉತ್ತರ ಅಕ್ಷಾಂಶದವರಿಗೆ ಮತ್ತು 77°34'52.47"E ಪೂರ್ವ ರೇಖಾಂಶದಿಂದ 77°37'25.19"E ಪೂರ್ವ ರೇಖಾಂಶದವರಿಗೆ ಕಂಡುಬರುತ್ತದೆ.