ಸ್ಮಶಾನ ಎಂಬುದು ಮಾನವ ಜನಾಂಗದ ಬಹು ಮುಖ್ಯ ಪ್ರದೇಶ. ಸತ್ತ ಮನುಷ್ಯನ ಶವಗಳನ್ನು ಸಮಾಧಿ ಮಾಡುವ ಅಥವಾ ಭೂಮಿಯನ್ನು ಅಗೆದು ಅದರ ಒಳಗೆ ಆತನನ್ನು ಇಡುವ ಒಂದು ಕ್ರಿಯೆ ನಡೆಸುವ ಜಾಗಕ್ಕೆ ಸ್ಮಶಾನ ಎಂದು ಕರೆಯುತ್ತೇವೆ. ಪುರಾತತ್ತ್ವ ಶಾಸ್ತ್ರದ ಆಧಾರದ ಮೇಲೆ ಉತ್ಖನನ ಮಾಡಿದ 130,000 ವರ್ಷಗಳ ಹಿಂದಿನ ನಿಯಾಂಡರ್ತಲ್ ಸಮಾಧಿಗಳನ್ನು ಪತ್ತೆಹಚ್ಚಿರುವ ವರದಿಗಳು ಕೂಡ ಇವೆ. ಪ್ರಾಚೀನ ಪ್ರಪಂಚದ ಸಂಸ್ಕೃತಿಯಲ್ಲಿ ಸಮಾಧಿಗಳನ್ನು ಸಾಮಾನ್ಯವಾಗಿ ಹೆಸರನ್ನು ಹೊಂದಿರುವ ಕಲ್ಲಿನಿಂದ ಮತ್ತು ವಿಸ್ತಾರವಾದ ಕಲ್ಲಿನ ಗೋಪುರಗಳಿಂದ ಗುರುತಿಸಲಾಗುತ್ತಿತ್ತು. ಉದಾಹರಣೆಗೆ ಈಜಿಪ್ಟ್‌ನ ಪಿರಮಿಡ್‌ಗಳು ಅಥವಾ ಗ್ರೀಸ್‌ನ ಥೋಲೋಸ್ ಗೋರಿಗಳು ಅಥವಾ ಮೆಗಾಲಿಥಿಕ್ ಕಲ್ಲಿನ ಡಾಲ್ಮೆನ್‌ಗಳು, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ನಲ್ಲಿ ಸಿಗುವಂತಹ ಪ್ಯಾಸೇಜ್ ಸಮಾಧಿಗಳು ಮತ್ತು ಕೈರ್ನ್‌ಗಳಿಂದ ಗುರುತಿಸಲ್ಪಟ್ಟಿವೆ. ಮೆಗಾಲಿಥಿಕ್ ಸಮಾಧಿಗಳು ಕೊರಿಯಾದಲ್ಲಿ ಅಂದಾಜು 30000 ದಷ್ಟು ಅಂದರೆ ಪ್ರಪಂಚದ ಎಲ್ಲಾ ಮೆಗಾಲಿಥ್ ಗಳಿಗೆ ಹೋಲಿಸಿದರೆ ಕೊರಿಯಾದಲ್ಲಿ ಸುಮಾರು 40% ನಷ್ಟು ಇರುವುದನ್ನು ಕಾಣಬಹುದು. ಮೆಗಾಲಿಥಿಕ್ ಡಾಲ್ಮೆನ್ಸ್ ಸಮಾಧಿಗಳನ್ನು ನಾವು ಭಾರತದಾದ್ಯಂತ ನೋಡಬಹುದು, ಕಬ್ಬಿಣದ ಯುಗಕ್ಕಿಂತ ಹಳೆಯದಾದವು. ಅಂದರೆ ಕ್ರಿಸ್ತ ಪೂರ್ವ 1500 ರಿಂದ ಕ್ರಿಸ್ತ ಪೂರ್ವ 500 ರ ವರೆಗಿನ ಮೆಗಾಲಿಥಿಕ್ ಡಾಲ್ಮೆನ್ಸ್ ಸಮಾಧಿಗಳನ್ನು ಗುರುತಿಸಬಹುದು. ಭಾರತದಲ್ಲಿ ಮೆಗಾಲಿಥಿಕ್ ಡಾಲ್ಮೆನ್ಸ್ ಸಮಾಧಿಗಳಿರುವ 3000 ಕ್ಕೂ ಹೆಚ್ಚು ಜಾಗಗಳನ್ನು ಗುರುತಿಸಲಾಗಿದೆ. ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಬಹಳಷ್ಟು ಕಡೆಗಳಲ್ಲಿ ಮೆಗಾಲಿಥಿಕ್ ಡಾಲ್ಮೆನ್ಸ್ ಇರುವ ಜಾಗಳನ್ನು ಕಾಣಬಹುದು ಅದರಲ್ಲಿಯೂ ವಿಶೇಷವಾಗಿ ನಮ್ಮ ಅಧ್ಯಯನ ಪ್ರದೇಶದಲ್ಲಿ (ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ, ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ) ಈ ಮೆಗಾಲಿಥಿಕ್ ಡಾಲ್ಮೆನ್ಸ್ ಗಳನ್ನೇ ಹೋಲುವ ಕಲ್ಲಿನ ಸಣ್ಣ ಎತ್ತರದ ಗೋಡೆಗಳು ಮತ್ತು ಚಾಪದಿಗಳಿಂದ ರಚಿಸಲ್ಪಟ್ಟ ಮೇಲ್ಛಾವಣಿಯ ವಿವಿಧ ಗಾತ್ರದ ಡಾಲ್ಮೆನ್ಸ್ ಗಳನ್ನು ಇಂದಿಗೂ ನೋಡುವುದು ವಿಶೇಷವಾಗಿದೆ. ನಾವು ಗಮನಿಸಿದಂತೆ 2002 ರಲ್ಲಿ ಕೆಲವು ಡಾಲ್ಮೆನ್ಸ್ ಗಳಲ್ಲಿ ಮನುಷ್ಯನ ಮೂಳೆಗಳನ್ನು ಸಹ ನೋಡಿರುವ ಮತ್ತು ದಾಖಲಿಸಿರುವ ಛಾಯಾಚಿತ್ರಗಳು ಸಹ ಇವೆ. ನಮ್ಮ ಹಳ್ಳಿಗಳಲ್ಲಿ ಮೆಗಾಲಿಥಿಕ್ ಡಾಲ್ಮೆನ್ಸ್ ಗಳಿಂದ ಹಿಡಿದು ಇಂದು ಹೈಟೆಕ್ ಸ್ಮಶಾನಗಳವರೆಗೆ ಬಂದು ತಲುಪಿವೆ. ಆದರೆ ನಮ್ಮ ಅಧ್ಯಯನ ಪ್ರದೇಶದಲ್ಲಿ ಸಿಗುವಂತಹ ಸ್ಮಶಾನಗಳಲ್ಲಿ ತುಂಬಾ ಹಳೆಯದಾದಂತಹ ಮಾವು, ನೇರಳೆ, ಹುಣಸೆ, ಆಲ, ಅತ್ತಿ ಮತ್ತು ಗೋಣಿ ಮುಂತಾದ ದೊಡ್ಡ ದೊಡ್ಡ ಮರಗಳನ್ನು ಕಾಣಬಹುದು ಜೊತೆಗೆ ಅವುಗಳಿಗೆ ಹೊಂದಿಕೊಡಿರುವ ಜೀವವೈವಿಧ್ಯತೆಯನ್ನು ಕಾಣಬಹುದು.