ಸಾಲುಮರಗಳು

ಸಾಲು ಮರಗಳನ್ನು ಬೆಳೆಸುವ ಪದ್ಧತಿಯನ್ನು ನಾವು ಪುರಾತನ ಕಾಲದಿಂದಲೂ ನೋಡಬಹುದು. ನಮ್ಮ ದೇಶವನ್ನು ಆಳಿದ ಕೆಲ ರಾಜರ ಚರಿತ್ರೆಗಳನ್ನು ಓದಿದಾಗ ರಸ್ತೆ ಬದಿಯ ಸಾಲು ಮರಗಳ ಬಗ್ಗೆ ತುಂಬ ಹಳೆಯ ಚರಿತ್ರೆಯೇ ಇದೆ. ರಸ್ತೆ ಬದಿಗಳಲ್ಲಿ ಸಾಲು ಮರಗಳನ್ನು ಬೆಳೆಸುವ ಪದ್ದತಿಯನ್ನು ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಚಕ್ರವರ್ತಿಯ ಕಾಲವಾದ ಕ್ರಿ.ಪೂ.273ರಲ್ಲಿಯೇ ಕಾಣಬಹುದು. ಹುಚ್ಚು ದೊರೆ ಎಂದೇ ಪ್ರಖ್ಯಾತನಾಗಿದ್ದ ''ಮಹಮ್ಮದ್ -ಬಿನ್- ತುಘಲಕ್'' ನು ತನ್ನ ರಾಜಧಾನಿಯನ್ನು ಕ್ರಿ.ಶ 1327 ರಲ್ಲಿ ಡೆಲ್ಲಿ ಯಿಂದ ದೇವಗಿರಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ರಸ್ತೆಗಳ ಅಕ್ಕಪಕ್ಕಗಳಲ್ಲಿ ಪೂರ್ಣ ಬೆಳೆದ ಮರಗಳನ್ನು ಬೇರೆಕಡೆಗಳಿಂದ ಕಿತ್ತು ತಂದು ನೆಟ್ಟಿರುವ ಉಲ್ಲೇಖಗಳನ್ನು ಚರಿತ್ರೆಗಳಲ್ಲಿ ಕಾಣಬಹುದು. ಮತ್ತೆ ಕ್ರಿ. ಶ. 1537 ರ ಸಮಯದಲ್ಲಿ ಬೆಂಗಳೂರನ್ನು ಕಟ್ಟಿಸಿದ ಕೆಂಪೇಗೌಡನು ಆಗ ಬೆಂಗಳೂರಿಗೆ ಸೇರುವಂತಹ ರಸ್ತೆಗಳ ಬದಿಗಳಲ್ಲಿ ಸಾಲುಮರಗಳನ್ನು ನೆಡೆಸಿರುವುದನ್ನು ನೋಡಬಹುದು. ನಾವು ಸಣ್ಣವರಿದ್ದಾಗ 1990ರ ನಂತರದ ಕಾಲಘಟ್ಟದಲ್ಲಿ ಬೆಂಗಳೂರಿಗೆ ಸೇರುವಂತಹ ಮುಖ್ಯರಸ್ತೆಗಳ ಬದಿಗಳಲ್ಲಿ ಸಾವಿರಾರು ಬೃಹದಾಕಾರದಲ್ಲಿ ಆವರಿಸಿದ ಮರಗಳ ನಡುವೆ ಓಡಾಡಿರುವುದು ಇಂದಿಗೂ ಕೂಡ ನೆನೆಪಿನಲ್ಲಿ ಹಚ್ಚ ಹಸಿರಾಗಿದೆ. ಇದಕ್ಕಾಗಿಯೇ ಬೆಂಗಳೂರಿಗೆ “ಉದ್ಯಾನ ನಗರಿ” ಎಂಬ ಬಿರುದು ಬಂದಿದ್ದು.

ಡಬ್ಲ್ಯೂ ಸಿ ಜಿ ಯು, 2014ರ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಬನ್ನೇರುಘಟ್ಟ ದಿಂದ ಆನೇಕಲ್ ನಡುವಿನ ಸುಮಾರು 20 ಕಿ. ಮೀ. ನಷ್ಟು ದೂರವಿರುವ ರಾಜ್ಯ ಹೆದ್ದಾರಿಯಲ್ಲಿನ ಪಕ್ಕದಲ್ಲಿನ, ಸರಿಸುಮಾರು 500 ವರ್ಷಗಳ ಹಳೆಯ ಸಾಲು ಮರಗಳಾದ ಆಲ, ಅತ್ತಿ, ಅರಳಿ, ಬಸರಿ, ಗೋಣಿ, ಬೇವು, ತಾರೆ ತಂಗಾಡಿ ಮುಂತಾದ 2500 ಕ್ಕೂ ಹೆಚ್ಚು ಮರಗಳನ್ನು ದಾಖಲಿಸಿತ್ತು. ಆ ಮರಗಳ ಸುತ್ತಳತೆ, ಎತ್ತರಗಳ ಜೊತೆಗೆ ಆ ಮರದಲ್ಲಿರುವ ಹಕ್ಕಿ ಗೂಡು, ಜೇನುಗೂಡು, ಕಪ್ಪೆ, ಹಲ್ಲಿ, ಜೇಡ, ಚಿಟ್ಟೆ, ಬಾವಲಿ ಮುಂತಾದ ಜೀವವೈವಿಧ್ಯತೆಯನ್ನು ಸಹ ದಾಖಲೀಕರಿಸಲಾಗಿತ್ತು ಹಾಗೂ ರಸ್ತೆಬದಿಯ ಸಾಲುಮರಗಳ ಜೊತೆಗಿನ ಮಾನವಜನ್ಯ ಚಟುವಟಿಕೆಗಳ ಮಾಹಿತಿಯನ್ನು ದಾಖಲೀಕರಣ ಮಾಡಲಾಗಿತ್ತು. ಆದರೆ ಇಂದು ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಯ ಕಾರಣ ಇಲ್ಲಿ ಈಗ ಯಾವುದೇ ಮರಗಳನ್ನು ನೋಡಲು ಕಾಣುವುದಿಲ್ಲ. ನಮ್ಮ ಅಧ್ಯಯನ ಪ್ರದೇಶದಲ್ಲಿ ಈ ಹೆದ್ದಾರಿಯ 3.45 ಕಿಲೋಮೀಟರ್ ಗಳಷ್ಟು ಉದ್ದದ ರಸ್ತೆಯು ಹಾದು ಹೋಗುತ್ತಿದ್ದು, ಪ್ರಸ್ತುತ ಇಲ್ಲಿ ಕಂಡುಬರುವ ಸಾಲುಮರಗಳ ಸಂಖ್ಯೆಗಳ ಜೊತೆಗೆ ಜೀವವೈವಿಧ್ಯತೆಯ ಬದಲಾವಣೆಯನ್ನು ಮತ್ತೊಮ್ಮೆ ದಾಖಲೀಕರಿಸಲು ಯೋಜಿಸಲಾಗಿದೆ.